ಕರ್ನಾಟಕದಲ್ಲಿ ರಾಜ್ಯ ಸರ್ಕಾರ ‘ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ’ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ, ಗ್ರಾಮೀಣ ಪ್ರದೇಶದವರಿಗೆ 1.75 ಲಕ್ಷ ರೂ. ಹಾಗೂ ನಗರ ಪ್ರದೇಶದವರಿಗೆ 2 ಲಕ್ಷ ರೂ. ಸಹಾಯಧನ ಘೋಷಣೆ ಮಾಡಿದೆ.
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ‘ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ‘. ಸಮಾಜದಲ್ಲಿ ಹಿಂದುಳಿದ ವರ್ಗದವರಿಗೂ ಶಾಶ್ವತ ನೆರವು ಕಲ್ಪಿಸಬೇಕು ಎಂಬ ಉದ್ದೇಶದಿಂದ 2015-16ರಲ್ಲಿ ಆರಂಭವಾದ ಈ ಯೋಜನೆಯು ಸ್ವಂತ ನಿವೇಶನವಿದ್ದೂ ಮನೆ ಕಟ್ಟಿಕೊಳ್ಳಲು ಶಕ್ತಿಯಿಲ್ಲದವರಿಗೆ ಆರ್ಥಿಕ ನೆರವು ನೀಡುವ ಮೂಲಕ ‘ಸ್ವಂತ ಮನೆ’ ಒದಗಿಸುವ ಗುರಿ ಹೊಂದಿದೆ
ಈ ಯೋಜನೆಯ ಪ್ರಮುಖ ಉದ್ದೇಶಗಳು
- ಇದು ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳ್ಳುತ್ತಿರುವ ಒಂದು ಪ್ರಮುಖ ವಸತಿ ಯೋಜನೆಯಾಗಿದ್ದು, 2015-16ರಲ್ಲಿ ಚಾಲನೆ ನೀಡಲಾಗಿದೆ.
- ಈ ಯೋಜನೆಯು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ವಸತಿ ರಹಿತ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ.
- ಸ್ವಂತ ನಿವೇಶನ ಅಥವಾ ಕಚ್ಚಾ ಮನೆ/ಗುಡಿಸಲು ಹೊಂದಿರುವವರಿಗೆ ಸುಸಜ್ಜಿತವಾದ ‘ಪಕ್ಕಾ’ ಮನೆ ನಿರ್ಮಿಸಿಕೊಳ್ಳಲು ಸರ್ಕಾರವು ಆರ್ಥಿಕ ಶಕ್ತಿಯನ್ನು ನೀಡುತ್ತದೆ.
- ಮನೆ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 1,75,000 ರೂ. ಮತ್ತು ನಗರ ಪ್ರದೇಶದವರಿಗೆ 2,00,000 ರೂ. ಸಹಾಯಧನವನ್ನು ನೀಡಲಾಗುತ್ತದೆ.
- ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಕೇಂದ್ರದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ಯೊಂದಿಗೆ ಸಂಯೋಜಿಸಿ ಹೆಚ್ಚುವರಿಯಾಗಿ 1,50,000 ರೂ.ವರೆಗೆ ಧನಸಹಾಯ ಪಡೆಯುವ ಅವಕಾಶವಿದೆ.
- ಈ ಯೋಜನೆಯ ಒಟ್ಟು ಲಭ್ಯವಿರುವ ಮನೆಗಳಲ್ಲಿ ಪರಿಶಿಷ್ಟ ಜಾತಿಗೆ 70% ಮತ್ತು ಪರಿಶಿಷ್ಟ ಪಂಗಡಕ್ಕೆ 30% ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಅರ್ಹತೆಗಳು?
- ಈ ಯೋಜನೆಯು ಪ್ರಮುಖವಾಗಿ ದಲಿತ ವರ್ಗದ ಅಭಿವೃದ್ಧಿಗಾಗಿ ಮೀಸಲಾಗಿದ್ದು, ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಮೂಲತಃ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಅದಕ್ಕೆ ಪೂರಕವಾದ ದಾಖಲೆಗಳನ್ನು ಹೊಂದಿರಬೇಕು.
- ಫಲಾನುಭವಿಗಳನ್ನು ಗುರುತಿಸಲು ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಗ್ರಾಮೀಣ ಭಾಗದ ಅರ್ಜಿದಾರರ ವಾರ್ಷಿಕ ಆದಾಯ 32,000 ರೂ.ಗಳ ಒಳಗಿರಬೇಕು ಹಾಗೂ ನಗರ ಪ್ರದೇಶದವರ ವಾರ್ಷಿಕ ಆದಾಯ 87,600 ರೂ. ಗಳ ಮಿತಿಯನ್ನು ಮೀರಿರಬಾರದು.
- ಮನೆ ನಿರ್ಮಿಸಲು ಅರ್ಜಿದಾರರ ಹೆಸರಿನಲ್ಲಿ ಸ್ವಂತ ನಿವೇಶನ ಇರಬೇಕು ಅಥವಾ ಸರ್ಕಾರದಿಂದ ವಿತರಿಸಲ್ಪಟ್ಟ ಅಧಿಕೃತ ಹಕ್ಕುಪತ್ರವನ್ನು ಹೊಂದಿರಬೇಕು.
- ಅರ್ಜಿದಾರರು ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಅಥವಾ ಹಣವನ್ನು ಪಡೆದಿರಬಾರದು. ಇದು ಮೊದಲ ಬಾರಿಗೆ ಮನೆ ಕಟ್ಟುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸುವ ವಿಧಾನಗಳು
- ಈ ಯೋಜನೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (RGRHCL) ವತಿಯಿಂದ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗುತ್ತದೆ.
- ಆಸಕ್ತ ಮತ್ತು ಅರ್ಹ ಫಲಾನುಭವಿಗಳು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಜಾಲತಾಣದ ಲಿಂಕ್ ಅನ್ನು ಬಳಸಿ ಅದರ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಜಾಲತಾಣದಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ಅನುಸರಿಸಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ/ನಗರಸಭೆ ಕಚೇರಿಗಳಿಗೂ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.