ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ: ಸ್ವಂತ ಮನೆ ಕಟ್ಟಲು 2 ಲಕ್ಷ ರೂ.ವರೆಗೆ ಸಹಾಯಧನ, ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ‘ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ’ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ  ಉದ್ದೇಶದಿಂದ, ಗ್ರಾಮೀಣ ಪ್ರದೇಶದವರಿಗೆ 1.75 ಲಕ್ಷ ರೂ. ಹಾಗೂ ನಗರ ಪ್ರದೇಶದವರಿಗೆ 2 ಲಕ್ಷ ರೂ. ಸಹಾಯಧನ ಘೋಷಣೆ ಮಾಡಿದೆ. 

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ‘ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ ‘. ಸಮಾಜದಲ್ಲಿ ಹಿಂದುಳಿದ ವರ್ಗದವರಿಗೂ ಶಾಶ್ವತ ನೆರವು ಕಲ್ಪಿಸಬೇಕು ಎಂಬ ಉದ್ದೇಶದಿಂದ 2015-16ರಲ್ಲಿ ಆರಂಭವಾದ ಈ ಯೋಜನೆಯು ಸ್ವಂತ ನಿವೇಶನವಿದ್ದೂ ಮನೆ ಕಟ್ಟಿಕೊಳ್ಳಲು ಶಕ್ತಿಯಿಲ್ಲದವರಿಗೆ ಆರ್ಥಿಕ ನೆರವು ನೀಡುವ ಮೂಲಕ ‘ಸ್ವಂತ ಮನೆ’ ಒದಗಿಸುವ ಗುರಿ ಹೊಂದಿದೆ

ಈ ಯೋಜನೆಯ  ಪ್ರಮುಖ ಉದ್ದೇಶಗಳು

  • ಇದು ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳ್ಳುತ್ತಿರುವ ಒಂದು ಪ್ರಮುಖ ವಸತಿ ಯೋಜನೆಯಾಗಿದ್ದು, 2015-16ರಲ್ಲಿ ಚಾಲನೆ ನೀಡಲಾಗಿದೆ.
  • ಈ ಯೋಜನೆಯು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ವಸತಿ ರಹಿತ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ.
  • ಸ್ವಂತ ನಿವೇಶನ ಅಥವಾ ಕಚ್ಚಾ ಮನೆ/ಗುಡಿಸಲು ಹೊಂದಿರುವವರಿಗೆ ಸುಸಜ್ಜಿತವಾದ ‘ಪಕ್ಕಾ’ ಮನೆ ನಿರ್ಮಿಸಿಕೊಳ್ಳಲು ಸರ್ಕಾರವು ಆರ್ಥಿಕ ಶಕ್ತಿಯನ್ನು ನೀಡುತ್ತದೆ.
  • ಮನೆ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ 1,75,000 ರೂ. ಮತ್ತು ನಗರ ಪ್ರದೇಶದವರಿಗೆ 2,00,000 ರೂ. ಸಹಾಯಧನವನ್ನು ನೀಡಲಾಗುತ್ತದೆ.
  • ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಕೇಂದ್ರದ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ಯೊಂದಿಗೆ ಸಂಯೋಜಿಸಿ ಹೆಚ್ಚುವರಿಯಾಗಿ 1,50,000 ರೂ.ವರೆಗೆ ಧನಸಹಾಯ ಪಡೆಯುವ ಅವಕಾಶವಿದೆ.
  • ಈ ಯೋಜನೆಯ ಒಟ್ಟು ಲಭ್ಯವಿರುವ ಮನೆಗಳಲ್ಲಿ ಪರಿಶಿಷ್ಟ ಜಾತಿಗೆ 70% ಮತ್ತು ಪರಿಶಿಷ್ಟ ಪಂಗಡಕ್ಕೆ 30% ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ.

ಅರ್ಹತೆಗಳು?

  • ಈ ಯೋಜನೆಯು ಪ್ರಮುಖವಾಗಿ ದಲಿತ ವರ್ಗದ ಅಭಿವೃದ್ಧಿಗಾಗಿ ಮೀಸಲಾಗಿದ್ದು, ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
  • ಅರ್ಜಿದಾರರು ಮೂಲತಃ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು ಅದಕ್ಕೆ ಪೂರಕವಾದ ದಾಖಲೆಗಳನ್ನು ಹೊಂದಿರಬೇಕು.
  • ಫಲಾನುಭವಿಗಳನ್ನು ಗುರುತಿಸಲು ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಗ್ರಾಮೀಣ ಭಾಗದ ಅರ್ಜಿದಾರರ ವಾರ್ಷಿಕ ಆದಾಯ 32,000 ರೂ.ಗಳ ಒಳಗಿರಬೇಕು ಹಾಗೂ ನಗರ ಪ್ರದೇಶದವರ ವಾರ್ಷಿಕ ಆದಾಯ 87,600 ರೂ. ಗಳ ಮಿತಿಯನ್ನು ಮೀರಿರಬಾರದು.
  • ಮನೆ ನಿರ್ಮಿಸಲು ಅರ್ಜಿದಾರರ ಹೆಸರಿನಲ್ಲಿ ಸ್ವಂತ ನಿವೇಶನ ಇರಬೇಕು ಅಥವಾ ಸರ್ಕಾರದಿಂದ ವಿತರಿಸಲ್ಪಟ್ಟ ಅಧಿಕೃತ ಹಕ್ಕುಪತ್ರವನ್ನು ಹೊಂದಿರಬೇಕು.
  • ಅರ್ಜಿದಾರರು ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಅಥವಾ ಹಣವನ್ನು ಪಡೆದಿರಬಾರದು. ಇದು ಮೊದಲ ಬಾರಿಗೆ ಮನೆ ಕಟ್ಟುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ.

ಅರ್ಜಿ ಸಲ್ಲಿಸುವ ವಿಧಾನಗಳು

  • ಈ ಯೋಜನೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (RGRHCL) ವತಿಯಿಂದ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗುತ್ತದೆ.
  • ಆಸಕ್ತ ಮತ್ತು ಅರ್ಹ ಫಲಾನುಭವಿಗಳು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಜಾಲತಾಣದ ಲಿಂಕ್ ಅನ್ನು ಬಳಸಿ ಅದರ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜಾಲತಾಣದಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ಅನುಸರಿಸಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಾದ ಪುರಸಭೆ/ನಗರಸಭೆ ಕಚೇರಿಗಳಿಗೂ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Leave a Comment